ಕೋಳೂರು ಕೊಡಗೂಸು

ಮುಗ್ಧ ಬಾಲಕಿಯೊಬ್ಬಳ ಭಕ್ತಿಯ ಮಹಿಮೆಯನ್ನು ನಿರೂಪಿಸುವ ಒಂದು ಕಥೆ. ಈ ವಸ್ತುವನ್ನು ಆಧರಿಸಿ ಹರಿಹರ ಒಂದು ರಗಳೆ ಬರೆದಿದ್ದಾನೆ. ಭೀಮಕವಿಯ ಬಸವಪುರಾಣ, ಷಡಕ್ಷರಿಯ ವೃಷಭೇಂದ್ರ ವಿಜಯ ಮೊದಲಾದ ವೀರಶೈವ ಪುರಾಣಗಳಲ್ಲಿ ಈ ಕಥಾಪ್ರಸಂಗವನ್ನು ಕಾಣಬಹುದು.

	ಗಣಸಹಸ್ರದಲ್ಲಿ ಕೊಡಗೂಸಿನ ಹೆಸರು ಬಂದಿದೆ. ಮೇಲಿನ ಕವಿಗಳಲ್ಲದೆ ಅನೇಕರು ಈಕೆಯ ಭಕ್ತಿಯನ್ನು ಹಾಡಿ ಹೊಗಳಿದ್ದಾರೆ. ಭಕ್ತಿಸಾಧನೆಯಲ್ಲಿ ಪರಿಶುದ್ಧವಾದ ಮನಸ್ಸು ಮತ್ತು ಏಕೈಕ ನಿಷ್ಠೆಗಳನ್ನು ಎತ್ತಿಹಿಡಿಯುವ ಉಜ್ಜ್ವಲ ಸಂಕೇತವಾದ ಈ ಕಥೆ ಚಿರಂತನವಾಗಿದ್ದು ನಿತ್ಯನೂತನವಾಗಿದೆ.

	ಕಥೆ ಸಂಗ್ರಹವಾಗಿ ಹೀಗಿದೆ : ಕೋಳೂರಿನಲ್ಲಿ ಶಿವದೇವನೆಂಬ ಭಕ್ತನಿದ್ದ. ಈ ಗ್ರಾಮ ಗುಲ್ಬರ್ಗ ಜಿಲ್ಲೆಯಲ್ಲಿದೆ; ಕನ್ನೆಕೋಳೂರು ಎಂದೂ ಇದನ್ನು ಕರೆಯುತ್ತಾರೆ. ಶಿವಭಕ್ತ ಮತ್ತು ಆತನ ಹೆಂಡತಿ ಉತ್ಕಟ ಶಿವಭಕ್ತರಾಗಿದ್ದರು. ಆ ಊರಿನ ಕಲ್ಲೇಶ್ವರಲಿಂಗ ಇವರ ಆರಾಧ್ಯ ದೈವವಾಗಿತ್ತು. ಪ್ರತಿನಿತ್ಯವೂ ಅತ್ಯಂತ ಭಕ್ತಿಯಿಂದ ಅದನ್ನು ಪೂಜಿಸಿ ಕಪಿಲವರ್ಣದ ಗೋವಿನ ಹಾಲನ್ನು ನೈವೇದ್ಯ ಮಾಡುವ ನೇಮವನ್ನು ಇವರು ಇಟ್ಟುಕೊಂಡಿದ್ದರು.

	ಈ ದಂಪತಿಗಳಿಗೆ ಒಬ್ಬಳೇ ಮಗಳು. ಹೆಸರು ಚೆನ್ನಕ್ಕ. ಭಕ್ತಿಯ ವಾತಾವರಣದಲ್ಲಿಯೇ ಬೆಳೆದ ಈಕೆಯಲ್ಲಿ ಭಕ್ತಿ ಸಹಜವಾಗಿಯೇ ಅಳವಟ್ಟಿತ್ತು. ಏಳು ವರ್ಷಗಳೂ ತುಂಬದ ಈ ಕೂಸು ಅವರ ಸಂಸಾರದ ಸಾರಸರ್ವಸ್ವವಾಗಿತ್ತು. 

	ಒಮ್ಮೆ ಚೆನ್ನಕ್ಕನ ತಂದೆತಾಯಿಗಳು ಕಾರ್ಯನಿಮಿತ್ತರಾಗಿ ಪರವೂರಿಗೆ ಹೋಗಬೇಕಾಗಿ ಬಂತು. ಆಗ ಅವರು ಕಲ್ಲೇಶ್ವರನ ಪೂಜೆ ಮತ್ತು ನೈವೇದ್ಯದ ಹೊಣೆಯನ್ನು ಚೆನ್ನಕ್ಕನಿಗೆ ವಹಿಸಿದರಲ್ಲದೆ ಪೂಜೆಯ ಅನಂತರ ಹಾಲನ್ನು ಶಿವನಿಗೆ ತಪ್ಪದೆ ಅರ್ಪಿಸುವಂತೆ ಹೇಳಿಹೋದರು. ಈ ಸುಯೋಗ ಲಭಿಸಿದುದಕ್ಕಾಗಿ ಚೆನ್ನಕ್ಕ ಸಂತೋಷದಿಂದ ಹಿಗ್ಗಿದಳು. ಸ್ನಾನ ಮಾಡಿ, ಮಡಿಯುಟ್ಟು, ದೇವಾಲಯಕ್ಕೆ ಬಂದಳು. ಶಿವಲಿಂಗವನ್ನು ಭಕ್ತಿಯ ತನ್ಮಯತೆಯಿಂದ ಪೂಜಿಸಿದಳು. ಅನಂತರ ಬಳ್ಳದಲ್ಲಿ ತಾನು ತಂದಿದ್ದ ಹಾಲನ್ನು ಶಿವನ ಮುಂದಿಟ್ಟು ಅದನ್ನು ಕುಡಿಯುವಂತೆ ಪ್ರಾರ್ಥಿಸಿದಳು. ಆದರೆ ಇವಳ ಪ್ರಾರ್ಥನೆ ವ್ಯರ್ಥವಾಯಿತು. ಶಿವ ಬಂದು ಹಾಲನ್ನು ಕುಡಿಯಲಿಲ್ಲ. ಭಕ್ತೆಯ ಮುಗ್ಧಸಂಭ್ರಮ ಮರೆಯಾಯಿತು. ಆತಂಕದಿಂದ ಶಿವನನ್ನು ಮತ್ತೆ ಮತ್ತೆ ಬೇಡಿಕೊಳ್ಳತೊಡಗಿದಳು. ಬಹುಶಃ ತಾನು ಎದುರಿಗಿರುವುದರಿಂದ ಶಿವ ಹಾಲನ್ನು ಕುಡಿಯಲಾರನೆಂದು ಮರೆಗೆ ಹೋಗಿ ನಿಂತಳು. ಪುನಃ ಬಂದು ನೋಡಿದಳು; ಪ್ರಾರ್ಥಿಸಿದಳು. ಎಲ್ಲವೂ ವ್ಯರ್ಥವಾದಾಗ ಅವಳ ಸಂಕಟ ಮಿತಿಮೀರಿತು. ತನ್ನ ಭಕ್ತಿಯಲ್ಲೇನೋ ಕುಂದಿರಬೇಕೆಂದು ಅನಿಸಿತು. ಕ್ಷಮಿಸಿ ಹಾಲನ್ನು ಕುಡಿಯಬೇಕೆಂದು ಶಿವನನ್ನು ಪ್ರಾರ್ಥಿಸಿದಳು. ಆದರೆ ಎಲ್ಲವೂ ವಿಫಲವಾದಾಗ ಆ ನಿರಾಶೆಯನ್ನು ತಾಳಲಾರದೆ ಅಲ್ಲಿದ್ದ ಕಲ್ಲಿಗೆ ತನ್ನ ತಲೆಯನ್ನು ಹೊಡೆದುಕೊಳ್ಳುತ್ತ ತನ್ನನ್ನೇ ಅರ್ಪಿಸಿಕೊಳ್ಳಲು ಸಿದ್ಧಳಾದಳು. ಶಿವಗತ್ಯಂತರವಿಲ್ಲದೆ ಕೂಡಲೇ ಪ್ರತ್ಯಕ್ಷನಾಗಿ ನೈವೇದ್ಯದ ಹಾಲನ್ನು ಕುಡಿದು ಅವಳನ್ನು ಸಂತೈಸಿದ. ಅಂದಿನಿಂದ ದಿನದಿನವೂ ಇವಳ ಪೂಜೆಯ ಕ್ರಮ ಅದೇ ರೀತಿಯಲ್ಲಿ ಮುಂದುವರಿಯಿತು. ನಿತ್ಯವೂ ಶಿವ ಬಂದು ಹಾಲನ್ನು ಕುಡಿಯುತ್ತಿದ್ದ. ಅನಂತರ ಬರಿಯ ಬಟ್ಟಲನ್ನು ಚೆನ್ನಕ್ಕ ಮನೆಗೆ ತರುತ್ತಿದ್ದಳು. 

	ಹೀಗೆ ಕೆಲವು ದಿನಗಳು ಕಳೆದಮೇಲೆ ಚೆನ್ನಕ್ಕನ ತಂದೆತಾಯಿಗಳು ಊರಿಗೆ ಹಿಂದಿರುಗಿದರು. ದೇವಾಲಯಕ್ಕೆ ಹೋಗಿ ಬರುತ್ತಿದ್ದ ಮಗಳನ್ನು ಎದುರಿನಲ್ಲಿಯೇ ಸಂಧಿಸಿದರು. ಆಕೆಯ ಕೈಯಲ್ಲಿದ್ದ ಹಾಲಿನ ಪಾತ್ರೆ ಬರಿದಾಗಿದ್ದುದನ್ನು ಗಮನಿಸಿ ಅಚ್ಚರಿಗೊಂಡರು. ಶಿವ ನಿಜವಾಗಿ ಹಾಲು ಕುಡಿಯುವನೇ ಎಂಬುದನ್ನು ಪರೀಕ್ಷಿಸಿ ನೋಡುವ ಮನಸ್ಸಾಯಿತು, ಅವರಿಗೆ. 

ಮರುದಿನ ಪೂಜೆಯ ಸಮಯ ಬಂತು. ಚೆನ್ನಕ್ಕ ಎಂದಿನಂತೆ ಪೂಜೆಮಾಡಿ ಹಾಲನ್ನು ಮುಂದಿಟ್ಟಾಗ ಶಿವ ಅದನ್ನು ಕುಡಿಯಲಿಲ್ಲ. ಮಗಳು ಸುಳ್ಳು ಹೇಳಿದಳೆದು ತಂದೆಗೆ ಕೋಪ ಬಂತು. ಅವಳನ್ನು ದಂಡಿಸುವುದಕ್ಕಾಗಿ ಮುಂದೆ ಬಂದ. ಮುಗ್ಧೆ ಚೆನ್ನಕ್ಕ ಏನೂ ಮಾಡಲಾರದೆ ಶಿವನೇ ಗತಿಯೆಂದು ಓಡಿಹೋಗಿ ಲಿಂಗವನ್ನು ತಬ್ಬಿಕೊಂಡಳು. ಶಿವ ಪ್ರತ್ಯಕ್ಷನಾಗಿ ಅವಳನ್ನು ತನ್ನಲ್ಲಿ ಅಡಗಿಸಿಕೊಂಡ. 

	ಇದನ್ನು ಕಂಡ ತಂದೆಗೆ ಪಶ್ಚಾತ್ತಾಪವಾಯಿತು. ಮಗಳನ್ನು ಕಳೆದುಕೊಳ್ಳಲಾರದೆ ಓಡಿಬಂದು ಶಿವನಲ್ಲಿ ಐಕ್ಯವಾಗುತ್ತಿದ್ದ ಆಕೆಯ ತಲೆಗೂದಲನ್ನು ಹಿಡೆದೆಳೆದ. ಆಗ ಕೂದಲು ಮಾತ್ರ ಹೊರಗುಳಿದು ಆಕೆ ಲಿಂಗದಲ್ಲಿ ಐಕ್ಯವಾದಳು. ಕೋಳೂರಿನಲ್ಲಿರುವ ಕಲ್ಲಿನಾಥನ ಲಿಂಗದಲ್ಲಿ ಈಗಲೂ ಕೂದಲ ಗುರುತುಗಳಿವೆ ಎನ್ನುತ್ತಾರೆ.

	ಅಂದಿನಿಂದ ಭಕ್ತೆ ಚೆನ್ನಕ್ಕ ಕೋಳೂರು ಕೊಡಗೂಸು (ಕೊಡದ ಕೂಸು-ಕನ್ಯೆ) ಎಂದೇ ಪ್ರಸಿದ್ಧಳಾದಳು.      (ಎಚ್.ಟಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ